ರಾಜಕೀಯ

ಕಮಲ ಪಕ್ಷದೊಳಗೆ ಬಿರುಸಿನ ಬೆಳವಣಿಗೆ: ಪಂಚಮಸಾಲಿಗಳಿಗೆ ಮಣೆ: ಯತ್ನಾಳ್ ಸ್ಥಾನ ತುಂಬಲು ನಿರಾಣಿ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆಯಾದ ಬೆನ್ನಲ್ಲಿಯೇ ಬಿಜೆಪಿ ಪಕ್ಷದೊಳಗಿನ ಚಟುವಟಿಕೆಗಳು ಬಿರುಸಾಗಿದ್ದು, ಆ ಸ್ಥಾನದ ಕೊರತೆಯನ್ನು ತುಂಬುವ ನಿಟ್ಟಿನಲ್ಲಿ ರಾಜಕೀಯ ಪ್ರಯತ್ನಗಳು ನಡೆಯುತ್ತಿವೆ.

ಬಿಜೆಪಿಯಲ್ಲಿ ಪಂಚಮಸಾಲಿ ನಾಯಕ ಪಟ್ಟದ ಭದ್ರ ಕೋಟೆಯನ್ನು ಕಟ್ಟಿಕೊಂಡಿದ್ದ ಯತ್ನಾಳ್, ಹಿಂದುತ್ವ ಪ್ರತಿಪಾದನೆ ಮಾಡಿಕೊಂಡೇ ಬಂದಿದ್ದರು.

ಅಷ್ಟೆ ಅಲ್ಲ, ಉತ್ತರ ಕರ್ನಾಟಕ ಭಾಗದಲ್ಲಿ ರಾಜಕೀಯ ಹಿಡಿತ ಇಟ್ಟುಕೊಳ್ಳುವ ಪ್ರಯತ್ನ ಮಾಡಿದ್ದರು.

 

 

 

 

 

 

 

ಪಂಚಮಸಾಲಿ ಚಳವಳಿ ನಡೆಯುವ ಸಂದರ್ಭದಲ್ಲಿ ಮುಂಚೂಣಿಯಲ್ಲಿದ್ದ ಯತ್ನಾಳ್ ನಿರ್ಗಮನವನ್ನು ಈಗ ಗಂಭೀರವಾಗಿ ಪರಿಗಣಿಸಿರುವ ಪಕ್ಷ, ಅಲ್ಲಿಗೆ ಅನುಭವವಿರುವ ಮತ್ತು ಪಕ್ವವಾದ ನಾಯಕನ್ನು ಮುಂಚೂಣಿಗೆ ತರಲು ತೆರೆ ಮರೆಯ ಕಸರತ್ತು ನಡೆಸುತ್ತಿದೆ.

ಯಡಿಯೂರಪ್ಪ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿ ಗುರುತಿಸಿಕೊಂಡಿದ್ದ ಮುರುಗೇಶ ನಿರಾಣಿ ಅವರನ್ನು ಮತ್ತೆ ಮುಂಚೂಣಿಗೆ ತಂದು ನಿಲ್ಲಿಸಲು ಯೋಜನೆ ರೂಪಿಸಲಾಗಿದೆ. ಆಗಿನ ಸಂದರ್ಭದಲ್ಲಿ ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ಕರುಣಿಸಿದ ಬಿಎಸ್‌ವೈ, ನನಗೆ ಆ ಸ್ಥಾನ ನೀಡಲಿಲ್ಲ. ಬೇಕೆಂತಲೇ ಪಕ್ಷದೊಳಗೆ ನನ್ನ ದೂರ ಮಾಡುತ್ತೇಲೆ ಬಂದರು ಎನ್ನುವ ಕಾರಣಕ್ಕಾಗಿಯೇ ಯತ್ನಾಳ್ ತೀವ್ರ ಆಕ್ರೋಶಗೊಂಡಿದ್ದು ಹಳೆಯ ಸಂಗತಿ.

ಬಿಜೆಪಿಯಲ್ಲಿ ಪಂಚಮಸಾಲಿ ನಾಯಕರಾಗಿರುವ ಅರವಿಂದ ಬೆಲ್ಲದ್ ಅವರು ವಿಧಾನಸಭೆಯಲ್ಲಿ ಉಪ ನಾಯಕರಾಗಿದ್ದಾರೆ. ಇನ್ನು ಸಿಸಿ ಪಾಟೀಲ್ ಅವರು ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಅಧ್ಯಕ್ಷರಾಗಿದ್ದಾರೆ. ಮುರುಗೇಶ್ ನಿರಾಣಿ ಚುನಾವಣೆಯಲ್ಲಿ ಸೋತ ಬಳಿಕ ಪ್ರಮುಖ ಜವಬ್ದಾರಿಯನ್ನು ನೀಡಿಲ್ಲ. ಆದ್ದರಿಂದ ಮುಂದೆ ಯತ್ನಾಳ್ ಸ್ಥಾನಕ್ಕೆ ನಿರಾಣಿ ಅವರನ್ನೆ ಪ್ರತಿಷ್ಠಾಪಿಸುವುದು ಸರಿಯಾದ ಕ್ರಮ ಎಂದು ಚರ್ಚೆ ಮಾಡಲಾಗಿದೆ.

ಸಿಎಂ ಆಗುವುದಕ್ಕೆ ಹೈಕಮಾಂಡ್‌ಗೆ 2 ಸಾವಿರ ಕೋಟಿ ಕೊಡಲು ಹೋಗಿದ್ದರು ಎಂದು ಮುರುಗೇಶ್ ನಿರಾಣಿ ಅವರನ್ನೆ ಗುರಿಯಾಗಿ ಇಟ್ಟುಕೊಂಡು ಅಂದು ಇದೇ ಯತ್ನಾಳ್ ಆರೋಪಿಸಿದ್ದರು. ಈ ಬಗ್ಗೆ ಇಬ್ಬರೂ ನಾಯಕರ ನಡುವೆ ಭಾರಿ ವಾಗ್ದಾಳಿಯೇ ನಡೆದುಹೋಗಿತ್ತು. ಇದೆಲ್ಲವೂ ಹಳೆ ಘಟನೆ.

ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಯತ್ನಾಳ್ ಸ್ಥಾನವನ್ನು ಸಮರ್ಥವಾಗಿ ರಾಜೀ ಇಲ್ಲದೆ ಮುಂದುವರಿಸಿಕೊಂಡು ಹೋಗುವ ಛಾತಿ ನಿರಾಣಿ ಅವರಿಗೆ ಇದೆ ಎಂದು ಮುಖಂಡರುಗಳ ಆಪ್ತ ಸಮಾಲೋಚನೆಯಲ್ಲಿ ಸಹಮತ ವ್ಯಕ್ತವಾಗಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿಗೆ ಹಿನ್ನೆಡೆ ಆಗಬಾರದು ಎಂದು ಲೆಕ್ಕಚಾರ ಹಾಕುತ್ತಿರುವ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದ ನಾಯಕರು, ಈಗಾಗಲೇ ನಿರ್ಧರಿಸಿರುವ ವಿಷಯಗಳನ್ನು ಮಾಜಿ ಸಿಎಂ ಯಡಿಯೂರಪ್ಪ ಅವರ ಮುಂದೆ ಇಟ್ಟು ಚರ್ಚೆ ಮಾಡಿ ಅಂತಿಮ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಿದೆ. ಸಾಮೂಹಿಕ ನಾಯಕತ್ವದಡಿ ಪಂಚಮಸಾಲಿ ನಾಯಕರನ್ನು ಒಗ್ಗೂಡಿಸಲು ಸ್ವಾಮೀಜಿಗಳ ಸಹಕಾರವನ್ನು ಪಡೆದುಕೊಳ್ಳಲು ವೇದಿಕೆ ಸಜ್ಜುಗೊಳಿಸಲಾಗುತ್ತಿದೆ.

ಇನ್ನು ಮುಂದೆ ಯತ್ನಾಳ್ ತಂಡ, ಮಾಡಬಹುದಾದ ಪ್ರಯತ್ನಗಳನ್ನು ಸೋಲಿಸಲು ಮತ್ತು ರಾಜಕೀಯ ಪ್ರತಿ ಪ್ರಯತ್ನಗಳನ್ನು ಮಾಡುವ ಬಗ್ಗೆಯೂ ಗಂಭೀರವಾಗಿ ಚರ್ಚೆ ನಡೆದಿದೆ.

ಏನಾದರೂ ಆಗಲಿ, ಬಿಜೆಪಿಯಲ್ಲಿಯೇ ಪಂಚಮಸಾಲಿ ಸಮುದಾಯದ ನಾಯಕರನ್ನು ಮಹತ್ವದ ಜವಾಬ್ದಾರಿ ನೀಡಿ ಉಳಿಸಿಕೊಳ್ಳುವ ಆ ಮೂಲಕ ಆ ಸಮುದಾಯಕ್ಕೆ ನಾಯಕತ್ವದ ಕೊರತೆ ಬಾದಿಸಂತೆ ನೋಡಿಕೊಳ್ಳುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಯತ್ನಾಳ್ ಉಚ್ಛಾಟನೆ ನಂತರ ಇನ್ನು ಹೆಚ್ಚಿನ ಜವಬ್ದಾರಿಯಿಂದ ಎಚ್ಚರಿಕೆಯ ಹೆಜ್ಜೆ ಇಡಲು ಬಿಜೆಪಿ ಮುಂದಾಗಿದೆ.